ಫೀಝೂ, ಆರ್ಮಂಡ್ ಹಿಪ್ಪೊಲೈಟ್ ಲೂಯಿ
	819-96. ಫ್ರೆಂಚ್‍ಭೌತವಿಜ್ಞಾನಿ. ಜನನ 23 ಸೆಪ್ಟಂಬರ್ 1819, ಮರಣ 18 ಸೆಪ್ಟಂಬರ್ 1896. ಬೆಳಕಿನ ವೇಗವನ್ನು ಭೂಮಿ ಮೇಲಿನ ಪ್ರಯೋಗಾಧಾರಿತವಾಗಿ ಮೊತ್ತಮೊದಲಿಗೆ ನಿರ್ಣಯಿಸಿದವ. ಮೊದಲು ವೈದ್ಯವಿಜ್ಞಾನ ಅಧ್ಯಯನ ಪ್ರಾರಂಭಿಸಿದರೂ ಅನಾರೋಗ್ಯದ ನಿಮಿತ್ತ ಅದನ್ನು ಕೈಬಿಟ್ಟು ಬಳಿಕ ಅರೇಗೊ ಮತ್ತು ರೇನೊ ಮುಂತಾದ ಭೌತವಿಜ್ಞಾನಿಗಳ ಪ್ರವಚನಗಳನ್ನು ಕೇಳಿ ಭೌತವಿಜ್ಞಾನಿದಲ್ಲಿ ಆಸಕ್ತನಾದ. ಆಗರ್ಭಶ್ರೀಮಂತನಾಗಿದ್ದುದರಿಂದ ಪ್ರಯೋಗಗಳ ಮೇಲೆ ಹೇರಳ ಹಣ ಹೂಡಲು ಹಿಂಜರಿಯಲಿಲ್ಲ. 1839ರಲ್ಲಿ ಈತ ಛಾಯಾಚಿತ್ರಗ್ರಹಣದಲ್ಲಿ ಆಸಕ್ತನಾಗಿ ಡೆಗೋರಿಯೊ ಮಾದರಿಯಿಂದ ಸ್ಥಿರ ಚಿತ್ರಣವನ್ನು ಪಡೆದ. ಇವನ ಈ ಕಾರ್ಯಗಳ ಕುರಿತಾಗಿ ವಿಚಾರ ವಿನಿಮಯ ನಡೆಸಲು ಬರುತ್ತಿದ್ದ ಫ್ಯೊಕೊ ಈತನೊಡನೆ ಸೇರಿ ಇಬ್ಬರೂ ಒಟ್ಟಾಗಿ 1845ರಿಂದ 1849ರ ತನಕ ಸಂಶೋಧನಾಧ್ಯಯನ ನಡೆಸಿದರು. ವಿಕಿರಣ ಉಷ್ಣ ಮತ್ತು ಬೆಳಕಿನ ಸಾಮ್ಯ, ಬೆಳಕಿನ ಆಂದೋಳನಗಳ ಅನುಕ್ರಮತೆ ಮತ್ತು ತರಂಗ ಸಿದ್ಧಾಂತದ ಪ್ರಾಬಲ್ಯಗಳನ್ನು ತೋರಿಸುವ ಪ್ರಯೋಗಗಳನ್ನು ಇಬ್ಬರೂ ಒಟ್ಟಾಗಿ ನಡೆಸಿದರು. ಕಣ ಸಿದ್ಧಾಂತವನ್ನು ಮೂಲೆ ಪಾಲು ಮಾಡುವ ಪ್ರಯೋಗವೊಂದನ್ನು ಅಭಿವೃದ್ಧಿಗೊಳಿಸುತ್ತದ್ದಂತೆ ಪರಸ್ಪರ ದೂರಗೊಂಡು ಸ್ವತಂತ್ರವಾಗಿ ಕೆಲಸ ಮಾಡತೊಡಗಿದರು. ಫೀಝೂ 1849ರಲ್ಲಿ ಪ್ರಾಯೋಗಿಕವಾಗಿ ಮೊತ್ತ ಮೊದಲಿಗೆ ಬೆಳಕಿನ ವೇಗವನ್ನು ಶೋಧಿಸಿದ. ನಕ್ಷತ್ರವೊಂದÀರಿಂದ ಬರುವ ಬೆಳಕಿಗೆ ಸಂಬಂಧಿಸಿದಂತೆ ಡಾಪ್ಲರ್ ಪರಿಣಾಮಕ್ಕೆ ವಿವರಣೆ ನೀಡಿದ ಫೀಝೂ ಈ ಪರಿಣಾಮವನ್ನು ವೀಕ್ಷಣೆಯ ನೇರದಲ್ಲಿ ನಕ್ಷತ್ರಗಳ ಸಾಪೇಕ್ಷ ವೇಗಗಳ ನಿರ್ಧರಣೆಗೆ ಹೇಗೆ ಉಪಯೋಗಿಸಬಹುದೆಂದು ತೋರಿಸಿದ. ಈಥರ್ ಮತ್ತು ರಾಶಿಗಳ ನಡುವೆ ಸಾಪೇಕ್ಷ ಚಲನೆ ಇದೆಯೇ ಎಂದು ನಿರ್ಧರಿಸಲು ನೀರಿನಂಥ ಚಲಿಸುವ ಮಾಧ್ಯಮದಲ್ಲಿ ಬೆಳಕಿನ ವೇಗದ ಮೇಲೆ ಹಲವಾರು ಪ್ರಯೋಗಗಳನ್ನು ನಡೆಸಿದ (1819). ಸ್ಛಟಿಕಗಳ ವ್ಯಾಕೋಚನವನ್ನು ನಿರ್ಧರಿಸಲು ವ್ಯತಿಕರಣ, ವಿದ್ಯಮಾನವನ್ನು ಉಪಯೋಗಿಸಿದ. ವಿದ್ಯುತ್ ಪ್ರೇರಕ ಸುರುಳಿಯ ಪ್ರಾಥಮಿಕ ಮಂಡಲದಲ್ಲಿ ವಿದ್ಯುತ್ ಸಂಧಾರಿತ್ರವನ್ನು ಸೇರಿಸಿ ಇದರ ಕಾರ್ಯ ಸಾಮಥ್ರ್ಯವನ್ನು ಹೆಚ್ಚಿಸಿದ. 1860ರಲ್ಲಿ ಈತನನ್ನು ಅಕ್ಯಾಡೆಮಿ ಆಫ್ ಸೈನ್ಸಿನ ಸದಸ್ಯನಾಗಿ ಚುನಾಯಿಸಲಾಯಿತು. 1866 ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ರಮ್‍ಫರ್ಡ್ ಪದಕ ಪಡೆದ. ವಿಜ್ಞಾನವನ್ನು ಹೃದಯದ ಉದಾತ್ತ ಭಾವನೆಗಳಿಗೆ ಅಂದರೆ ಮನಸ್ಸಾಕ್ಷಿಗೆ ವಿರುದ್ಧವಾಗಿ ಉಪಯೋಗಿಸಬಾರದೆಂದ ಫೀಝೂ ಹೇಳುತ್ತಿದ್ದ.
(ಐ.ವಿ.)